Ishan Kishan And Aditi Hundia In Relationship- ಭಾರತ ಟಿ20 ತಂಡದ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶಾನ್ ವಿಶ್ವಕಪ್ ಟೂರ್ನಿಯಲ್ಲಿ ಮಿಂಚುತ್ತಿದ್ದಂತೆ ಅವರ ವೈಯಕ್ತಿಕ ವಿಚಾರಗಳ ಬಗ್ಗೆಯುೂ ಬಹಿರಂಗವಾಗಿ ಚರ್ಚೆಯಾಗುತ್ತಿದೆ. ಅವರ ಬಹುಕಾಲದ ಗೆಳತಿ ಅದಿತಿ ಹುಂಡಿಯಾ ಜೊತೆಗಿನ ಪ್ರೇಮ ವಿಚಾರ ಮುನ್ನಲೆಗೆ ಬಂದಿದೆ. ಅವರ ತಾತ ಅನುರಾಗ್ ಪಾಂಡೆ ಅವರೇ ಅದಿತಿಯ ಬಗ್ಗೆ ಮಾತನಾಡಿದ್ದಾರೆ. ಜೊತೆಗೆ ಮಕ್ಕಳಿಷ್ಟವೇ ನಮ್ಮಿಷ್ಟ ಎಂದಿರುವುದು ಬಹುತೇಕ ವಿವಾಹಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಂತೆಯೇ.
ಟೀಂ ಇಂಡಿಯಾದ ಮಾಜಿ ಕೋಚ್ ರಾಹುಲ್ ದ್ರಾವಿಡ್ ಕೈಯಲ್ಲಿ `ಚೆನ್ನಾಗಿ ಡೊಮೆಸ್ಟಿಕ್ ಕ್ರಿಕೆಟ್ ನಲ್ಲಿ ಪಳಗಿ ಬಾ’ ಎಂದು ಕ್ಲಾಸ್ ತಗೊಂಡಿದ್ದ ಇಶಾನ್ ಕಿಶನ್ ಕಳೆದ ಮೂರು ವರ್ಷಗಳ ಕಾಲ ರಾಷ್ಟ್ರೀಯ ತಂಡದ ಕಡೆ ತಲೆ ಹಾಕಿ ಮಲಗಿರಲಿಲ್ಲ. ಇದೀಗ ಟಿ20 ವಿಶ್ವಕಪ್ ಗೂ ಮೊದಲು ನ್ಯೂಜಿಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಅಚಾನಕ್ ಆಗಿ ಅವಕಾಶ ಪಡೆದಾತ ಟೀಂ ಇಂಡಿಯಾದ ಅತ್ಯಂತ ಭರವಸೆಯ ಬ್ಯಾಟರ್ ಆಗಿ ರೂಪುಗೊಂಡಿದ್ದಾರೆ.
5 ವರ್ಷಗಳ ಹಿಂದೆ ಈ ಚಾಕಲೇಟ್ ಬಾಯ್ ರಾಷ್ಟ್ರೀಯ ತಂಡಕ್ಕೆ ಕಾಲಿಟ್ಟಾಗಲೇ ಬಹಳಷ್ಟು ಹುುಡುಗಿಯರು ಫಿದಾ ಆಗಿದ್ದರು. ಈಗ ಟೀಂ ಇಂಡಿಯಾದಲ್ಲಿ ಸ್ಥಾನ ಭದ್ರಪಡಿಸಿಕೊಂಡ ಮೇಲಂತೂ ಅಭಿಮಾನಿನಿಯರ ಬಳಗ ದೊಡ್ಡದಾಗಿದೆ. ಆದರೆ 27ರ ಹರೆಯದ ಈ ಯುವಕ ಈಗಾಗಲೇ ಸುಂದರಿಯೊಬ್ಬಳ ಪ್ರೇಮಪಾಶಕ್ಕೆ ಸಿಲುಕಿದ್ದಾರೆಂದು ತಿಳಿದು ಬಂದಿದೆ. ಆ ವಿಚಾರ ಈಗಾಗಲೇ ಮನೆಮಂದಿಗೆಲ್ಲಾ ತಿಳಿದೂ ಆಗಿದೆ. ಹಾಗಿದ್ದರೆ ಯಾರು ಆ ಬಾಲೆ ಎಂದು ತಿಳಿಯುವ ಕುತೂಹಲ ನಿಮಗಿದ್ದರಬಹುದು.
ಮಕ್ಕಳಿಷ್ಟವೇ ನಮ್ಮಿಷ್ಟ
ಇಶಾನ್ ಕಿಶನ್ ತಾತಾ ಅನುರಾಗ್ ಪಾಂಡೆ ಅವರು ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಈ ವಿಚಾರವಾಗಿ ಎಎನ್ಐ ಜೊತೆ ಮಾತನಾಡಿರುವ ಅವರು. ಇಶಾನ್ ಕಿಶನ್ ಅವರು ಪ್ರಸ್ತುತ ಮಾಡೆಲ್ ಅದಿತಿ ಹುಂಡಿಯಾ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಮಾತ್ರವಲ್ಲದೆ ಅವರಿಬ್ಬರು ಮದುವೆಯಾಗುವುದಿದ್ದರೆ ತಮ್ಮ ಸಂಪೂರ್ಣ ಒಪ್ಪಿಗೆ ಇದೆ ಎಂದು ಸಹ ಹೇಳಿದ್ದಾರೆ. “ಇಶಾನ್ ಕಿಶನ್ ಅವರು ಯಾರನ್ನು ಮದುವೆಯಾಗಲು ಇಚ್ಛಿಸಿದರೂ ನನ್ನ ಒಪ್ಪಿಗೆ ಅಂತೂ ಇದೆ. ಆತನ ನಿರ್ಧಾರಕ್ಕೆ ನಮ್ಮ ಸಮ್ಮತಿ ಇದೆ. ಅದಿತಿ ಆತ ಪ್ರೇಯಸಿ. ಆಕೆ ಮಾಡೆಲ್. ಮಕ್ಕಳ ಇಷ್ಟವನ್ನು ನಾವು ಒಪ್ಪಿಕೊಳ್ಳಬೇಕು” ಎಂದು ಮುಕ್ತವಾಗಿ ಮಾತನಾಡಿದ್ದಾರೆ.
29 ವರ್ಷದ ಅದಿತಿ ಹುಂಡಿಯಾ ಅವರು ರಾಜಸ್ಥಾನದ ಜೈಪುರ ಮೂಲದವರು. 2017ರ ಫೆಮಿನಾ ಮಿಸ್ ಇಂಡಿಯಾ ಫೈನಲಿಸ್ಟ್ ಆಗಿದ್ದ ಅವರು 2018ರ ಮಿಸ್ ದಿವಾ ಸ್ಪರ್ಧೆಯಲ್ಲೂ ಭಾಗವಹಿಸಿದ್ದರು. ಪ್ರಸ್ತುತ ಮಾಡೆಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2021ರಿಂದಲೂ ಇವರಿಬ್ಬರು ಸ್ನೇಹಿತರಾಗಿದ್ದು ಅನೇಕ ಬಾರಿ ಜೊತೆಯಾಗಿ ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇವರಿಬ್ಬರ ನಡುವೆ ಪ್ರೀತಿ ಇದೆ ಎಂಬ ಬಗ್ಗೆ ಅನುಮಾನಗಳಿದ್ದವು. ಇದೀಗ ಇಶಾನ್ ಕಿಶನ್ ಅವರ ತಾತನೇ ಹೇಳಿರುವುದರಿಂದ ಖಚಿತವಾಗಿದೆ.

