ಈ ಬಾರಿಯ ಬಜೆಟ್ ಮೇಲೆ ಮಂಡ್ಯ ಜನತೆ ಬೆಟ್ಟದಷ್ಟು ನಿರೀಕ್ಷೆಯಿಟ್ಟುಕೊಂಡಿದ್ದು, ಈ ಬಾರಿಯಾದರೂ ಬಜೆಟ್ ನಲ್ಲಿ ಮಂಡ್ಯ ಜಿಲ್ಲೆಯಲ್ಲಿ ವಿವಿಧ ಭಾಗಗಳ ಸಮಗ್ರ ಅಭಿವೃದ್ದಿಗೆ ವಿಶೇಷ ಪ್ಯಾಕೇಜ್ ಲಭಿಸಬಹುದು ಎಂದು ಎದರುನೋಡುತ್ತಿದ್ದಾರೆ. ಅದರಲ್ಲೂ ಪ್ರಮುಖವಾಗಿ ಮಂಡ್ಯ ಪ್ರವಾಸೋದ್ಯಮ, ರಸ್ತೆ ಅಭಿವೃದ್ದಿಗೆ ಮಾಡಿ ನಗರೀಕರಣ ಮಾಡುವುದು ಸೇರಿದಂತೆ ಅಲ್ಲಿನ ರೈತರಿಗೆ ಹೆಚ್ಚಿನ ಅನುದಾನ ನೀಡುವ ಮೂಲಕ ಅಭಿವೃದ್ದಿಗ ಮಾಡಬೇಕು ಎಂಬ ಒತ್ತಾಯವಿದೆ. ಇನ್ನೂ, ಮಂಡ್ಯ ಜನರು ಈ ಬಾರಿಯ ಬಜೆಟ್ ನಲ್ಲಿ ಯಾವೆಲ್ಲಾ ವಿಚಾರಗಳನ್ನು ನಿರೀಕ್ಷಿಸುತ್ತಿದ್ದಾರೆ ಎಂಬ ಕುರಿತ ಮಾಹಿತಿ ಇಲ್ಲಿದೆ..
ಮಂಡ್ಯ: ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆ ಹೊಸ್ತಿಲಲ್ಲಿ ಮಂಡನೆಯಾಗುತ್ತಿರುವ ಬಜೆಟ್ನಲ್ಲಿ ಮಂಡ್ಯ ಜಿಲ್ಲೆಯ ನಿರೀಕ್ಷೆ ಸಾಕಷ್ಟಿದೆ. ಚುನಾವಣೆ ದೃಷ್ಟಿಯಿಂದಾದರೂ ಒಂದಷ್ಟು ಯೋಜನೆಗಳು ಜಿಲ್ಲೆಗೆ ಮಂಜೂರಾಗಬಹುದು, ವಿಶೇಷ ಪ್ಯಾಕೇಜ್ನಲ್ಲಿ ಅನುದಾನ ಸಿಗಬಹುದೆಂಬ ಭರವಸೆ ಜನರಲ್ಲಿ ಮೂಡಿದೆ.
ಪ್ರವಾಸೋದ್ಯಮಕ್ಕೆ ವಿಶೇಷ ಬಜೆಟ್ ನಿರೀಕ್ಷೆ
ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶಗಳಿವೆ. ವಿಶ್ವವಿಖ್ಯಾತ ಬೃಂದಾವನ, ಗಗನಚುಕ್ಕಿ ಜಲಪಾತ, ರಂಗನತಿಟ್ಟು, ಮೇಲುಕೋಟೆ, ಕೆರೆತೊಣ್ಣೂರು, ಶ್ರೀರಂಗಪಟ್ಟಣ, ಆದಿಚುಂಚನಗಿರಿ ಶ್ರೀ ಕ್ಷೇತ್ರದಂತಹ ಪ್ರಮುಖ ಪ್ರವಾಸಿ ತಾಣಗಳಿವೆ. ಈ ಪೈಕಿ ಆದಿಚುಂಚನಗಿರಿ ಶ್ರೀ ಕ್ಷೇತ್ರವನ್ನು ಸರಕಾರದ ಅನುದಾನದೊಂದಿಗೆ ಶ್ರೀಮಠವೇ ಅಭಿವೃದ್ಧಿಪಡಿಸುತ್ತಿದೆ. ಉಳಿದೆಲ್ಲಾ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಸರಕಾರದ ಅನುದಾನವೇ ಮುಖ್ಯವಾಗಿದೆ. ಶ್ರೀರಂಗಪಟ್ಟಣದಲ್ಲಿ ನೂರಾರು ಐತಿಹಾಸಿಕ ಸ್ಮಾರಕಗಳು, ಕೋಟೆ, ಬುರುಜು, ಕಂದಕಗಳಿವೆ. ಕಾವೇರಿ ನದಿಯಿಂದ ಸುತ್ತುವರೆದಿರುವ ದ್ವೀಪ ಪಟ್ಟಣ ಶ್ರೀರಂಗಪಟ್ಟಣವನ್ನು ಸಿಡ್ನಿ, ಮೆಕ್ಸಿಕೊ ಮಾದರಿಯಲ್ಲಿ ಅಭಿವೃದ್ಧಿಪಡಿಸಬಹುದು ಎಂಬುದು ಪ್ರವಾಸಿಗರು, ಇತಿಹಾಸತಜ್ಞರ ಅಭಿಪ್ರಾಯ.
ಪ್ರವಾಸೋದ್ಯಮ ಇಲಾಖೆ ಪಟ್ಟಿ ಪ್ರಕಾರವೇ ಜಿಲ್ಲೆಯಲ್ಲಿ ಒಟ್ಟು 106 ಪ್ರವಾಸಿ ತಾಣಗಳಿವೆ. ಸರಕಾರವೇ ಅವುಗಳನ್ನು ಅಧಿಕೃತವಾಗಿ ಪ್ರವಾಸಿ ತಾಣಗಳ ಪಟ್ಟಿಗೆ ಸೇರಿ ಆದೇಶ ಹೊರಡಿಸಿದೆ. ಆದರೆ, ಪ್ರವಾಸೋದ್ಯಮ ವಿಷಯದಲ್ಲಿ ಜಿಲ್ಲೆಯು ಅಷ್ಟೆನೂ ಪ್ರಗತಿ ಸಾಧಿಸಿಲ್ಲವೆನ್ನುವುದು ಕಣ್ಣಿಗೆ ಕಾಣುವ ಸತ್ಯ. ಪರಿಣಾಮ ಪ್ರವಾಸಿಗರನ್ನು ಸೆಳೆಯಲು ಹಿಂದೆ ಬೀಳುತ್ತಿದೆ. ಹೀಗಾಗಿ ಹೊಸ ಯೋಜನೆ ಅನುಷ್ಠಾನಗೊಳಿಸುವ ಮೂಲಕ ಪ್ರವಾಸೋದ್ಯಮವನ್ನು ಪುನಃಶ್ವೇತನಗೊಳಿಸಿ, ಆರ್ಥಿಕ ಸಂಪನ್ಮೂಲ ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕಿದೆ.
ರಸ್ತೆ ಅಭಿವೃದ್ದಿಗೆ ಒತ್ತು
ಜಿಲ್ಲೆ ವ್ಯಾಪ್ತಿಯಲ್ಲಿ ರಾಜ್ಯ, ಜಿಲ್ಲಾ ಹೆದ್ದಾರಿ ಸೇರಿದಂತೆ ಬಹುತೇಕ ರಸ್ತೆಗಳು ಹಾಳಾಗಿವೆ. ಮಂಡ್ಯ ನಗರದೊಳಗಿನ ರಸ್ತೆಗಳು ಅಧ್ವಾನಗೊಂಡಿವೆ. ಅವುಗಳ ದುರಸ್ತಿ/ ಪುನರ್ ನಿರ್ಮಾಣ ಕಾರ್ಯವು ಆದ್ಯತೆ ಮೇರೆಗೆ ಆಗಬೇಕಿದೆ. ಇದಕ್ಕಾಗಿ ವಿಶೇಷ ಪ್ಯಾಕೇಜ್ನ ಅಗತ್ಯವಿದೆ. ಜಿಲ್ಲೆಯಲ್ಲಿ ಮೂರು ರಾಷ್ಟ್ರೀಯ ಹೆದ್ದಾರಿಗಳು, ಮೂರ್ನಾಲ್ಕು ರಾಜ್ಯ ಹೆದ್ದಾರಿಗಳಿವೆ. ಜಿಲ್ಲಾ ಯಿಂದಾಗಿ ಮಂಡ್ಯ ನಗರಕ್ಕೆ ಉತ್ತರ ಭಾಗದಲ್ಲಿ ಬೈಪಾಸ್ ರಸ್ತೆ ನಿರ್ಮಾಣವಾಗಿದೆ. ದಕ್ಷಿಣ ಭಾಗದಲ್ಲೂ ಬೈಪಾಸ್ ನಿರ್ಮಾಣವಾದರೆ ನಗರದ ಸುತ್ತಲೂ ರಿಂಗ್ ರೋಡ್ ಆದಂತಾಗಲಿದೆ. ಇದು ನಗರದ ಬೆಳವಣಿಗೆಗೂ ಅನುಕೂಲವಾಗಲಿದೆ.

